ಇಲ್ಲಿಯವರೆಗೆ:
ಶ್ರೀ ರಾಮಾನುಜಾಚಾರ್ಯರು ಶ್ರೀರಂಗದಿಂದ ಬೇಲೂರಿಗೆ ಬಂದ ಸಂಗತಿ ಹಾಗು ಬೇಲೂರಿನಲ್ಲಿ ನಡೆದ ಸಂಗತಿಗಳನ್ನು ತಿಳಿದುಕೊಂಡೆವು.
ಮುಂದೆ…..
ಯತಿರಾಜರಾದ ರಾಮಾನುಜರಿಗೆ ಒಂದು ಉಕ್ಕಟ ಆಸೆ ಮನದಾಳದಲ್ಲಿತ್ತು. – ಅಂದು ತ್ರೇತಾಯುಗದಲ್ಲಿ ದಶರಥ ಚಕ್ರವರ್ತಿಯು ತನ್ನ ಜ್ಯೇಷ್ಠಪುತ್ರನಾದ ಶ್ರೀರಾಮಚಂದ್ರನಿಗೆ ರಾಜ್ಯಾಭಿಷೇಕ ಮಾಡಿ ಕಿರೀಟಧಾರಣೆ ಮಾಡಬೇಕೆಂದು ಆಸೆ ಪಟ್ಟು, ಕುಲಪುರೋಹಿತರಾದ ವಸಿಷ್ಠಮುನಿಗಳು ಪುಷ್ಯನಕ್ಷತ್ರದ ದಿನದಂದು ರಾಜ್ಯಾಭಿಷೇಕಕ್ಕೆ ದಿನ ನಿಶ್ಚಯಿಸಿ ಕೊಟ್ಟಿದ್ದರು, ಆದರೆ, ಕಿರಿಯ ರಾಣಿ ಕೈಕೇಯಿಯಿಂದ ಅದು ನೆರವೇರಲಿಲ್ಲ. ಶ್ರೀ ರಾಮಾಚಂದ್ರನು ಸೀತಾ-ಲಕ್ಷ್ಮಣರೊಡನೆ 14 ವರ್ಷ ವನವಾಸಕ್ಕೆ ಹೊರಟನು, ಅದೇ ಕೊರಗಿನಿಂದ ದಶರಥನು ಇಹಲೋಕ ತ್ಯಜಿಸಿದನು.- ದಶರಥ ಚಕ್ರವರ್ತಿಯ ಆ ಆಸೆ್ಯನ್ನು ತಾವು ನೆರವೇರಿಸಬೇಕೆಂದು ಶ್ರೀ ರಾಮಾನುಜರು ನಿಶ್ಚಯಿಸಿದರು. ಅದರಂತೆ, ದಶರಥನಂತೆ ತಾವು ತಂದೆಯ ಸ್ಥಾನದಲ್ಲಿನಿಂತು, ಯುವರಾಜನೆಂದು ಭಾವಿಸಿರುವ ಶೆಲ್ವಪಿಳ್ಳೈ ಸಂಪತ್ಕುಮಾರನಿಗೆ ಅಲೌಕಿಕವಾದ ಗರುಡಾಳ್ವಾರ್ ರಿಂದ ನಾಗಾಲೋಕದಿಂದ ತರಲ್ಪಟ್ಟ, ಮಹಾಮಹಿಯವಾದ “ವೈರಮುಡಿ” ಎನ್ನುವ ವಜ್ರಖಚಿತವಾದ ಕಿರೀಟವನ್ನು ಅದೇ ಪುಷ್ಯ ನಕ್ಷತ್ರದಂದು ಧಾರಣೆ ಮಾಡಿಸಿದರು. ಪರಮ ತೃಪ್ತಿಯನ್ನು ಹೊಂದಿದರು. ದೇವಾಲಯಗಳ ನಿರ್ಮಾಣದ ಕಾರ್ಯಗಳು, ಮೂರ್ತಿ ಪ್ರತಿಷ್ಠಾಪನೆಗಳು ಅವರುಗಳ ದಿನನಿತ್ಯದ ಆರಾಧನ ವಿಧಿಗಳು, ವರ್ಷಾರಭ್ಯ ನಡೆಸುವ ಉತ್ಸವಾದಿ ಕಾರ್ಯಕ್ರಮಗಳು, ಅವುಗಳ ಉಸ್ತುವಾರಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ರಾಮಾನುಜರು ಇವುಗಳಲ್ಲೇ ಮುಳುಗಿ ಹೋಗಿದ್ದರು. ಜೊತೆಗೆ ತಿರುನಾರಾಯಣರ ಸೇವೆ ಮಾಡುತ್ತಾ ದಿವ್ಯಪ್ರಬಂಧಗಳ ಪ್ರವಚನ- ಊರಿನ ಜನರಿಗೆ (ಸನ್ಮಾರ್ಗದಲ್ಲಿರುವಂತೆ) ಹಿತೋಪದೇಶ ಮಾಡುತ್ತಾ ಅವರ ಅತ್ಯಂತ ಪ್ರೀತಿಪಾತ್ರ ಆಚಾರ್ಯರಾಗಿದ್ದರು. ಯತೀಶ್ವರರಾದ ಶ್ರೀರಾಮಾನುಜಾಚಾರ್ಯರು ಜಾತಿಬೇಧವಿಲ್ಲದೇ ಎಲ್ಲ ಜನರನ್ನೂ ಪ್ರೀತಿಯಿಂದ, ಅಭಿಮಾನದಿಂದ ಒಂದೇ ದೃಷ್ಟಿಯಲ್ಲಿ ಕಾಣುತ್ತಿದ್ದರು. ಜನರಿಗೂ ಆಚಾರ್ಯರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದ್ದಂತಿತ್ತು. ಶೆಲ್ವಪಿಳ್ಳೆಯನ್ನು ಅವರಷ್ಟು ಪ್ರೀತಿಸುವವರು ಯಾರೂ ಇಲ್ಲವೆನ್ನ ಬಹುದು. ಶೆಲ್ವಪಿಳ್ಳೆ ಸಂಪತ್ಕುಮಾರನು ಅವರಿಗೆ ದೇವರಾಗಿರಲಿಲ್ಲ, ಅಭಿಮಾನ ಕುಮಾರನಾಗಿದ್ದನು, ಪ್ರೀತಿಯ ಪುತ್ರನಾಗಿದ್ದನು.
ಇದೇ ವೇಳೆ, ಶ್ರೀ ರಂಗನಾಥನು ಮತ್ತೊಂದು ಲೀಲೆಯನ್ನು ತೋರಿಸಿದನು. ಶ್ರೀ ರಂಗದಿಂದ ಬಂದ ಇಬ್ಬರು ಯಾತ್ರಾರ್ಥಿಗಳು ತಿರುನಾರಾಯಣನ ದರ್ಶನಕ್ಕೆ ಬಂದಿದ್ದರು.ಅವರಿಂದ ಆ ಮತಾಂಧನಾದ ಚೋಳರಾಜನು ಈಗ ಇಲ್ಲವೆಂದೂ, ಈಗ ರಾಜನಾಗಿರುವ ಅವನ ಮಗನಿಂದ ಪ್ರಜೆಗಳಿಗೆ ಯಾವ ಉಪಟಳವೂ ಇಲ್ಲವೆಂದೂ ತಿಳಿಯಿತು. ಕೂರೇಶರ ಬಗ್ಗೆ ಯಾವ ಪೂರ್ವ ವಿವರಗಳೂ ತಿಳಿಯಲಿಲ್ಲ. ಮತಾಂಧನಾದ ರಾಜನಿಂದ ಕಣ್ಣುಗಳನ್ನು ಕಳೆದುಕೊಂಡ ಅವರು, ಈಗ ಶ್ರೀರಂಗದಲ್ಲಿಲ್ಲವೆಂದೂ ತಿಳಿಸಿದರು. ಆಚಾರ್ಯರು ಕೂರೇಶರನ್ನು ನೆನಪಿಸಿಕೊಂಡು ಬಹಳ ದುಃಖಿತರಾದರು. ತನ್ನಿಂದಲೇ ಅವರಿಗೆ ಹೀಗಾಯಿತೆಂದು ಪರಿತಪಿಸಿದರು.ಈಗ ಸದ್ಯದಲ್ಲಿ ಕೂರತ್ತಾಳ್ವಾರ್ ಎಲ್ಲಿದ್ದಾರೆ? ಅವರ ಸ್ಥಿತಿಗತಿಗಳು ಹೇಗಿದೆ? ಎಂದು ತಿಳಿದುಕೊಂಡು ಬರಲು ತಮ್ಮ ಆಪ್ತ ಶಿಷ್ಯರಾದ ‘ಮಾರುತಿ ಚಿರಿಯಾಂಡಾನ್’ ಎಂಬುವರನ್ನು ಮತ್ತಿಬ್ಬರು ಶಿಷ್ಯರೊಂದಿಗೆ ಶ್ರೀರಂಗಕ್ಕೆ ಕಳುಹಿಸಿಕೊಟ್ಟರು ಮತ್ತು ಅವರು ಆದಷ್ಟು ಶೀಘ್ರವಾಗಿ ಹಿಂತಿರುಗಬೇಕೆಂಬುದಾಗಿ ಆದೇಶವಿತ್ತರು. ಕೂರೇಶರ ವಿಷಯ ತಿಳಿಯಲು ಅವರ ಮನಸ್ಸು ಕಾತುರಗೊಂಡಿತ್ತು. ಶ್ರೀ ರಾಮಾನುಜರು ತಿಳಿಸಿದಂತೆ ಶ್ರೀ ರಂಗಕ್ಕೆ ತೆರಳಿದ್ದ ಶಿಷ್ಯರುಗಳು ಶೀಘ್ರವೇ ಬಂದು ಅಲ್ಲಿನ ವಿಚಾರವೆಲ್ಲವನ್ನು ವಿವರವಾಗಿ ತಿಳಿಸಿದರು. ಕಣ್ಣುಗಳನ್ನು ಕಳೆದುಕೊಂಡ ಅವರಿಬ್ಬರೂ ಹಾಗೆಯೇ ಕಷ್ಟಪಟ್ಟು ಶ್ರೀ ರಂಗಕ್ಕೆ ಬರುತ್ತಿರುವಾಗ ಮಾರ್ಗಮಧ್ಯದಲ್ಲಿ ಆ ಹಿರಿಯರು ನೋವು ತಡೆಯಲಾಗದೆ ಅನುನೀಗಿದರು. ಕೂರತ್ತಾಳ್ವಾನರು ಬಹಳ ಪ್ರಯಾಸದಿಂದ ಶ್ರೀ ರಂಗಕ್ಕೆ ಮರಳಿ ಬಂದಾಗ, ರಾಮಾನುಜರ ಶಿಷ್ಯರೆಂದು ರಾಜಭಟರು ರಂಗನಾಥನ ದೇವಾಲಯದಲ್ಲಿ ಪ್ರವೇಷಿಸಲು ಬಿಡಲಿಲ್ಲ. ಬಹಳ ಬೇಸರಗೊಂಡ ಕೂರೇಶರು, ಶ್ರೀರಂಗವನ್ನು ತೊರೆದು ಪತ್ನಿಯೊಡನೆ ಮಧುರೆಯ ಸಮೀಪದಲ್ಲಿರುವ ಅಳಗರ್ ಮಲೈ ಅಥವ ‘ತಿರುಮಾಲಿರುಂ ಶೋಲೈ’ ಎಂಬಲ್ಲಿ ವಾಸವಾಗಿದ್ದಾರೆ ಎಂದು ಹೇಳಿದರು..
ಕೂರೇಶರನ್ನು ಭೇಟಿಯಾಗಲು ತಿರುನಾರಾಯಣದಿಂದಲೂ, ಶೆಲ್ವಪಿಳ್ಳೈಯಿಂದಲೂ ಅನುಮತಿ ಪಡೆದುಕೊಂಡು ಶೀಘ್ರವಾಗಿ ತಾವು ಶ್ರೀರಂಗಕ್ಕೆ ಪ್ರಯಾಣಿಸುವುದಾಗಿ ಶಿಷ್ಯರಿಗೆ ತಿಳಿಸಿದರು. ಈ ಸುದ್ದಿ ತಿಳಿದ ಊರಿನ ಜನರಿಗೆ ದಿಕ್ಕೇ ತೋಚದಂತಾಯಿತು. ಇದನ್ನು ಯಾರೂ ಊಹಿಸಿರಲಿಲ್ಲ. ನಡೆದಾಡುವ ದೈವದಂತಿರುವ ಆಚಾರ್ಯರು ತಮ್ಮನ್ನು ಬಿಟ್ಟು ಹೋಗುತ್ತಿರುವುದು ಅವರಿಗೆ ಸಹಿಸಲಸಾಧ್ಯವಾದ ವಾರ್ತೆಯನಿಸಿತು. ಶಿಷ್ಯರುಗಳು ಹಾಗು ಊರಿನ ಜನರು ತಮ್ಮನ್ನು ತೊರೆದು ಹೋಗಕೂಡದೆಂದು ಬಹುವಾಗಿ ಪ್ರಾರ್ಥಿಸಿದರು. ಇನ್ನು ಮುಂದೆ ತಮ್ಮ ಅಜ್ಞಾನವನ್ನು ಕಳೆಯುವವರಾರು, ತಮಗೆ ಹಿತೋಪದೇಶ ಮಾಡುವವರಾರು? ನಡುನೀರಿನಲ್ಲಿ ಕೈ ಬಿಟ್ಟು ಹೋಗುವಂತೆ ತಮ್ಮನ್ನು ಬಿಡಬಾರದೆಂದು ನಾನಾ ವಿಧವಾಗಿ ಪ್ರಾರ್ಥಿಸಿದರು. ಯತಿರಾಜರಾದ ಆಚಾರ್ಯ ಶ್ರೀರಾಮಾನುಜರು ಅವರನ್ನು ಸಮಾಧಾನ ಪಡಿಸಿ ಯಾರೂ ಆತಂಕ ಪಡಬಾರದೆಂದೂ, ಅವರ ಜೊತೆಯಾಲ್ಲಿರುವುದಾಗಿ ತಿಳಿಸಿದರು. ತನಗೂ ಕೂಡ ಶೆಲ್ವಪಿಳ್ಳೈಯನ್ನೂ ಮತ್ತು ಅವರನ್ನೂ ಬಿಟ್ಟುಹೋಗುವುದು ಕಷ್ಟವೇ, ಆದರೆ ಅನಿವಾರ್ಯವಾಗಿ ಹೋಗಲೇಬೇಕು ಎಂದು ಸಾಂತ್ವನ ಹೇಳಿದರು. ಭಕ್ತರು, ಶಿಷ್ಯರು , ಊರ ಜನರು ತಮ್ಮನ್ನು ಅನುದಿನ ಸ್ಮರಿಸಲು ತಮ್ಮ ತದ್ರೂಪವಾದ ಪ್ರತಿಮೆಯೊಂದನ್ನು ತಯಾರಿಸಿದರು. ತಾವೇ ಈ ಪ್ರತಿಮೆಯೊಳಗೆ ಆವಾಹಿಸುತ್ತೇನೆಂದು ಶ್ರೀ ರಾಮಾನುಜರು ಪ್ರತಿಮೆಯನ್ನು ಆಲಂಗಿಸಿ ಅದಕ್ಕೆ ಜೀವದುಂಬಿದರು.
ಶ್ರೀ ಭಗವದ್ರಾಮಾನುಜಾಚಾರ್ಯರು ಹೊರಡುವ ದಿನ ಬಂದೇಬಿಟ್ತಿತು. ಜನರೆಲ್ಲ ಸೇರಿ ಕಣ್ಣೀರ್ಗರೆಯುತ್ತನಿಂತು ಏನಾದರೂ ಹಿತವಚನ ನುಡಿಯ ಬೇಕೆಂದು ಕೋರಿದರು. ’ತಮ್ಮ ಪ್ರೀತಿಯ ಕುವರನಾದ ಶೆಲ್ವಪಿಳ್ಳೈ ಸಂಪತ್ಕುಮಾರನನ್ನು ಅಕ್ಕರೆಯಿಂದ ನೋಡಿ ಕೊಳ್ಳಬೇಕು. ಯುವರಾಜನಾದ ಅವನನ್ನು ಭಕ್ತಿಯಿಂದಲೂ, ಗೌರವದಿಂದಲೂ ಕಾಣಬೇಕು. ಪರಸ್ಪರ ಮನಸ್ತಾಪವಿಲ್ಲದೆ ಅವನ ಸೇವೆ ಮಾಡಬೇಕು. ಎಲ್ಲರೂ ಒಗ್ಗಟ್ಟಾಗಿ ಭಗವಂತನ ಕೈಂಕರ್ಯ ಮಾಡಬೇಕು ಎಂದರು. ಸಜ್ಜನರ ಸಹವಾಸ ಮಾಡಿ, ಜಾತಿ ನೋಡದೆ ಮಾನವೀಯತೆಯಿಂದ ಸೇವೆ ಮಾಡಿ ಎಂದು ಅಪ್ಪಣೆಗೊಳಿಸಿದರು.ನಾನು ಈ ಮೂರ್ತಿಯಲ್ಲಿ ಸ್ಥಿತವಾಗಿರುತ್ತೇನೆ. ನಿಮಗೆಲ್ಲ ಒಳ್ಳೆಯದಾಗ ಬೇಕೆಂದು ಆಶೀರ್ವದಿಸುತ್ತಿರುತ್ತೇನೆ.ಇದರಲ್ಲಿ ಸಂದೇಹ ಬೇಡ ಎಂದು ಹೇಳಿ ನಡೆದರು. ಸ್ವಲ್ಪ ಸಮಯದ ನಂತರ ಅಲ್ಲೇ ಇದ್ದ ಶಿಷ್ಯರುಗಳಿಗೆ ದುಃಖ ತಡೆಯಲಾಗದೇ-ಆಚಾರ್ಯರೇ ಎಲ್ಲಿದ್ದೀರಿ? ನಮ್ಮನ್ನು ಬಿಟ್ಟು ಹೋಗ ಬೇಡಿ ಎಂದಾಗ ಪ್ರೆತಿಮೆಯಿಂದ “ನಾ ಇಂದೇನ್, ನಾ ಇಂದೇನ್, ನಾ ಇಂದೇನ್”,ಅಂದರೆ, ”ನಾನು ಇಲ್ಲಿಯೇ ಇದ್ದೇನೆ” ಎಂದು 3 ಬಾರಿ ಹೇಳಿದಂತೆ ಕೇಳಿಸಿತಂತೆ. ಶಿಷ್ಯರಿಗೆ ಸಂತೃಪ್ತಿಯಾಗಿ ಸಂತೋಷದಿಂದ ಆನಂದಾಶ್ರುಗಳನ್ನು ಸುರಿಸಿ ಪ್ರತಿಮೆಗೆ ದೀರ್ಘದಂಡ ನಮಸ್ಕಾರ ಮಾಡಿ ತಮ್ಮ ಭಕ್ತಿ ಗೌರವಗಳನ್ನು ಅರ್ಪಿಸಿದರು.ಅಂದಿನಿಂದ ಯತಿರಾಜರಾದ ಶ್ರೀ ಭಗವದ್ರಾಮಾನುಜಾಚಾರ್ಯರ ಮೂರ್ತಿಗೆ “ತಾಮುಹುಂದ ತಿರುಮೇನಿ” ಎಂಬ ಹೆಸರಾಯಿತು. ಅಂದರೆ ’ತಾನು ಸಂತೋಷದಿಂದ ಒಪ್ಪಿದ ಮೂರ್ತಿ’ ಎಂದು. ಶ್ರೀ ರಾಮಾನುಜರು ಸುಮಾರು 18 ವರ್ಷಗಳ ಕಾಲ ಕರ್ನಾಟಕದಲ್ಲಿ, ಅದರಲ್ಲೂ 12 ವರ್ಷಗಳು, ಮೇಲುಕೋಟೆಯಲ್ಲಿಯೇ ಇದ್ದು,ಭಗವತ್ ಸೇವೆ ಹಾಗು ಮಾನವ ಕಲ್ಯಾಣಕ್ಕಾಗಿ ಶ್ರಮಿಸಿ, ಶ್ರೀ ವೈಷ್ಣವರಿಗೆ ದಾರಿ ದೀಪವಾಗಿದ್ದರು. ಇಂದಿಗೂ ಅವರ ಪದಚಿಹ್ನೆಯನ್ನು ಪಾಲಿಸುತ್ತಾ,ಕರ್ನಾಟಕದ ಬಹುದೇಕ ಸ್ಥಳಗಳಲ್ಲಿ, ಮುಖ್ಯವಾಗಿ, ಮೇಲುಕೋಟೆ, ಮೈಸೂರು ಹಾಗು ಬೆಂಗಳೂರಿನಲ್ಲಿ, ಬಹಳಷ್ಟು ಶ್ರೀ ವೈಷ್ಣವರು ಹಾಗು ಶ್ರೀ ರಾಮಾನುಜರ ಶಿಷ್ಯೋತ್ತಮರ ವಂಶಸ್ತರು ನೆಲೆಸಿದ್ಧಾರೆ.
ಜೈ ಯತಿರಾಜ !!